ಕ್ರಿ.ಶ. ೭೫೦ ರ ಕಾಲದ ಹೆಬ್ಬಾಳ ಕಿತ್ತಯ್ಯ ಶಿಲಾಬರಹವು ಕನ್ನಡ ಭಾಷೆ ಮತ್ತು ಲಿಪಿಯಲ್ಲಿರುವ ಶಿಲಾಬರಹವಾಗಿದೆ. ಇದು ಈವರೆಗೂ ದೊರೆತಿರುವ ಕನ್ನಡ ಭಾಷೆಯ ಹಳೆಯ ಶಿಲಾಬರಹಗಳಲ್ಲಿ ಒಂದಾಗಿದೆ ಮತ್ತು ಬೆಂಗಳೂರು ಪ್ರದೇಶದಲ್ಲಿ ದೊರೆತಿರುವ ಅತ್ಯಂತ ಹಳೆಯ ಶಿಲಾಬರಹವಾಗಿದೆ. ಇದು ೦೧ಮೇ೨೦೧೮ರಂದು ಪತ್ತೆಯಾಯಿತು. ಈ ಶಿಲಾಬರಹವು ಹೆಬ್ಬಾಳ ಪ್ರದೇಶದ ‘ಕಿತ್ತಯ್ಯ’ ಎಂಬ ವ್ಯಕ್ತಿಯ ಬಗ್ಗೆ ಇರುವ ಒಂದು ‘ಊರಳಿವು ವೀರಗಲ್ಲು’. ಅಂದರೆ ತಮ್ಮ ಊರಿನ ಮೇಲೆ ಆದ ಆಕ್ರಮಣದ ವಿರುದ್ಧ ಹೋರಾಡಿ ಮರಣಹೊಂದಿದ ವೀರರ ನೆನಪಿನಲ್ಲಿ ಗೌರವಪೂರ್ವಕವಾಗಿ ಹಾಕಲಾಗುವ ನೆನಪಿನ ಶಿಲೆ ಮತ್ತು ಬರಹ. ಈ ಶಿಲಾಬರಹವು ಎಂಟನೇ ಶತಮಾನದ ಗಂಗ ಸಾಮ್ರಾಜ್ಯದ ಶ್ರೀಪುರುಷ ರಾಜನ ಕಾಲದ್ದೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಶಾಸನಶಾಸ್ತ್ರ ಪ್ರೊಫೆಸರ್ ಆದ ಪಿ.ವಿ. ಕೃಷ್ಣಮೂರ್ತಿಯವರು ಗ್ರಹಿಸಿದ್ದಾರೆ. ಈಗ ಇದು ಹೆಬ್ಬಾಳದ ನಗರ ಗ್ರಂಥಾಲಯದ ಪಕ್ಕದಲ್ಲಿ ಸಮುದಾಯಧನಸಂಗ್ರಹದ ಮೂಲಕ ಕಟ್ಟಲಾದ ಗಂಗಶೈಲಿಯ ಮಂಟಪದಲ್ಲಿ ಸ್ಥಾಪಿಸಲಾಗಿದೆ.. == ಇದರ ಪತ್ತೆ ಮತ್ತು ಕಾಲದ ಅಂದಾಜು == ಮೇ ೨೦೧೮ರ ವರೆಗೆ ಈ ಕಲ್ಲುಗಳು ಹೆಬ್ಬಾಳ ಹಳ್ಳಿಯ ಗೇಟ್ ಬಳಿ ರಸ್ತೆಬದಿಯ ಕಾಲುವೆ ಪಕ್ಕದಲ್ಲಿ ಯಾವುದೋ ಹಳೆಯ ಪೂಜೆಕಲ್ಲುಗಳಾಗಿ ಬಿದ್ದಿದ್ದವು. ರಸ್ತೆಯ ವಿಸ್ತರಣೆ ಕೆಲಸದಲ್ಲಿ ಆ ಕಲ್ಲುಗಳು ನಾಶವಾಗುವ ಹಂತದಲ್ಲಿದ್ದವು. ಇದನ್ನು ಗಮನಿಸಿದ ಹೆಬ್ಬಾಳ ಪ್ರದೇಶದ ವಾಸಿ ದಿಲೀಪ್ ಕ್ಷತ್ರಿಯ ಎಂಬುವವರು ರಿವೈವಲ್ ಹೆರಿಟೇಜ್ ಹಬ್ ಎನ್ನುವ ಸಂಸ್ಥೆಗೆ ವಿಷಯ ತಿಳಿಸಿದರು. ಈ ಸಂಸ್ಥೆಯು ಪಾರಂಪರಿಕ ಸ್ಮಾರಕಗಳ ಸಂರಕ್ಷಣೆಯಲ್ಲಿ ತೊಡಗಿದೆ. ಆ ಸಂಸ್ಥೆಯ ಸಹಾಯದೊಂದಿಗೆ ಆ ನಾಲ್ಕು ಶಿಲೆಗಳನ್ನು ಸಮೀಪದ ನಗರಪಾಲಿಕೆ ಕಚೇರಿಗೆ ವರ್ಗಾಯಿಸಲಾಯಿತು. ಈ ನಾಲ್ಕು ಕಲ್ಲುಗಳಲ್ಲಿ ಒಂದು ಕಲ್ಲುಅದುವರೆಗೂ ದಾಖಲೆಯಾಗದ ಒಂದು ವೀರಗಲ್ಲಾಗಿತ್ತು ಮತ್ತು ಮಣ್ಣಲ್ಲಿ ಹುಗಿದು ಹೋಗಿದ್ದ ಭಾಗದಲ್ಲಿ ಬರಹವನ್ನು ಹೊಂದಿತ್ತು.. ಶಾಸನತಜ್ಞರಾದ ಪಿ.ವಿ.ಕೃಷ್ಣಮೂರ್ತಿಯವರು ಇದನ್ನು ಅಧ್ಯಯನ ಮಾಡಿ ಇದು ಸುಮಾರು ಕ್ರಿ.ಶ. ೭೫೦ರ ಕಾಲದ್ದೆಂದು ಕಂಡುಹಿಡಿದರು. ಮಣ್ಣಲ್ಲಿ ಹುಗಿದು ಹೋಗಿದ್ದರಿಂದ ಅದರಲ್ಲಿದ್ದ ಬರಹವು ಮಾಸಿಹೋಗಿತ್ತು. ತ್ರೀಡಿ ಡಿಜಿಟಲ್ ಸ್ಕ್ಯಾನ್ ನೆರವಿನಿಂದ ಆ ಬರಹವನ್ನು ಓದಲು ಸಾಧ್ಯವಾಗಿಸಲಾಗಿ ಐತಿಹಾಸಿಕ ಕಾಲಾನುಕ್ರಮದಿಂದ ಅದು ಕ್ರಿಶ. ೭೫೦ರ ಕಾಲದ್ದೆಂದು ತೀರ್ಮಾನಿಸಲಾಯಿತು. ಆ ವೀರಗಲ್ಲಿನಲ್ಲಿ ಯಾವುದೇ ನಿರ್ದಿಷ್ಟ ದಿನಾಂಕವು ಉಲ್ಲೇಖವಾಗಿಲ್ಲ. ಇಂತಹ ಸಂದರ್ಭದಲ್ಲಿ ಸಾಂಪ್ರದಾಯಿಕ ಅಭ್ಯಾಸದಂತೆ ಅದಕ್ಕೆ ಹತ್ತಿರದ ಹತ್ತನೇ, ಐವತ್ತನೇ ಅಥವಾ ನೂರನೇ ವರ್ಷವನ್ನು ಪರಿಗಣಿಸಲಾಗುತ್ತದೆ. == ಶಿಲಾಬರಹದಲ್ಲಿರುವ ಪಠ್ಯ == ಇತಿಹಾಸ ದರ್ಪಣ ಸಂಪುಟ ೩೬-೩೮, ೨೦೧೮ರಲ್ಲಿ ಪಿ.ವಿ.ಕೃಷ್ಣಮೂರ್ತಿಯವರಿಂದ ಪ್ರಕಟಗೊಂಡಿರುವಂತೆ ಈ ಶಿಲಾಬರಹದಲ್ಲಿನ ಪಠ್ಯ ಈ ಕೆಳಗಿನಂತಿದೆ. == ಅರ್ಥವಿವರಣೆ == ಶಿಲಾಬರಹದ ಅರ್ಥ ಈ ರೀತಿ ಇದೆ. ಶ್ರೀಪುರುಷ ಮಹಾರಾಜನು ಭೂಮಿಯನ್ನು ಆಳುತ್ತಿದ್ದಾಗ ಪೆರ್ಬ್ಬೊಳಲನಾಡು-ಮೂವತ್ತನ್ನು ಪೆಳ್ನಾಗತ್ತರಸನು ಆಳುತ್ತಿರಲು ಆರಕಮ್ಮೊರ ಎಂಬ ವ್ಯಕ್ತಿಯ ಮೈದುನ ಕೊಡನ್ದಲೆ ಕಿತ್ತಯ್ಯನು ರಟ್ಟವಾಡಿಯ ದಂಡು ಬಂದಾಗ ಊರಿನ ನಾಶವನ್ನು ತಡೆಯಲು ಹೋರಾಡಿ ಸತ್ತು ಇಂದ್ರಲೋಕವನ್ನು ಸೇರಿದ. ಪೆರ್ಗುನ್ದಿ ಮತ್ತು ಅವನ ತಮ್ಮ ಕಿರ್ಗುನ್ದಿ ಸ್ಥಾಪಿಸಿದ ಕಲ್ಲು ಇದಾಗಿದೆ. ಈ ವೀರಗಲ್ಲು 'ಕಿತ್ತಯ್ಯ' ಎಂಬುವವನ ನೆನಪಿಗಾಗಿ ಗೌರವಾರ್ಥವಾಗಿ ಹಾಕಲಾಗಿದೆ. ಆತ 'ಪೆರ್ಬೊಳಲನಾಡು'-ಮೂವತ್ತರ ನಿವಾಸಿಯಾಗಿದ್ದು ರಟ್ಟವಾಡಿ (ರಾಷ್ಟ್ರಕೂಟ) ಸೈನ್ಯದ ಧಾಳಿಯ ವಿರುದ್ಧ ಹೋರಾಡಿ ಮರಣಹೊಂದಿದವನು. ಆ ದಾಳಿಯು ಪೆರ್ಬೊಳ ಊರನ್ನು ನಾಶಮಾಡಲು ಮಾಡಿದ ದಾಳಿಯಾಗಿತ್ತು. ಆ ಸಮಯದಲ್ಲಿ 'ಪೆಳ್ನಾಗತ್ತರ'ನು ಪೆರ್ಬೊಳಲನಾಡಿನ ಮುಖ್ಯಸ್ಥನಾಗಿದ್ದನು ಮತ್ತು 'ಶ್ರೀಪುರುಷ'ನು ದೊರೆಯಾಗಿದ್ದನು. ಇದರಲ್ಲಿ 'ಮೂವತ್ತು' ಎಂಬ ಸಂಖ್ಯೆಯು ಗಂಗ ಸಾಮ್ರಾಜ್ಯದಲ್ಲಿ ಮೂವತ್ತು ಊರುಗಳ ಅಡಳಿತ ಮುಖ್ಯಕೇಂದ್ರವಾಗಿ ಪೆರ್ಬೊಳನಾಡು ಇರುವುದನ್ನು ಸೂಚಿಸುತ್ತದೆ. ಗಂಗರ ಶ್ರೀಪುರುಷನು ಕ್ರಿ.ಶ ೭೨೬-೭೮೮ರ ನಡುವೆ ರಾಜ್ಯವಾಳಿದ ಗಂಗ ಸಾಮ್ರಾಜ್ಯದ ಶಕ್ತಿಶಾಲಿ ದೊರೆ. ಪಶ್ಚಿಮ ಗಂಗ ಸಾಮ್ರಾಜ್ಯವು ಕ್ರಿಶ ೪೦೦ ರಿಂದ ೧೦೦೦ ನೇ ಇಸವಿಯವರೆಗೆ ದಕ್ಷಿಣ ಭಾರತದಲ್ಲಿ ಒಂದು ಶಕ್ತಿಶಾಲಿ ಸಾಮ್ರಾಜ್ಯವಾಗಿತ್ತು. ಶ್ರೀಪುರುಷನ ರಾಜ್ಯವು ಗಂಗವಾಡಿ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು ಮತ್ತು ಈಗಿನ ಕೋಲಾರ, ಬೆಂಗಳೂರು, ಕೃಷ್ಣಗಿರಿ, ಸೇಲಂ, ಈರೋಡು, ಮಂಡ್ಯ, ಮೈಸೂರು, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳ ಪ್ರದೇಶಗಳಲ್ಲಿ ಹರಡಿತ್ತು. ಈ ಪ್ರದೇಶಗಳಲ್ಲಿ ದೊರೆತ ಆ ಕಾಲದ ಅನೇಕ ವೀರಗಲ್ಲುಗಳು ಆ ಕಾಲದಲ್ಲಿ ಗಂಗ ಮತ್ತು ರಾಷ್ಟ್ರಕೂಟರ ನಡುವೆ ನಡೆದ ಹಲವು ಕಾಳಗಗಳ ಬಗ್ಗೆ ಮಾಹಿತಿ ಒದಗಿಸುತ್ತವೆ. == ಹೆಬ್ಬಾಳ ಪ್ರದೇಶದ ಹೆಸರಿನ ಪದ ವ್ಯುತ್ಪತ್ತಿ == ಹೆಬ್ಬಾಳ ಎಂಬ ಪದದ ವ್ಯುತ್ಪತ್ತಿ ಈ ಕೆಳಕಂಡಂತಿದೆ. ಹಳೆಗನ್ನಡದಲ್ಲಿ ಇದು ಪಿರಿಯ (ಹಿರಿಯ) + ಪೊಱಲ್ (ಪಟ್ಟಣ) ಎಂದಾಗುತ್ತದೆ. ಪಿರಿಯ + ಪೊೞಲ್ = ಪೆರ್ಬೊೞಲ್ > ಪೆರ್ವ್ವೊೞಲ್ > ಪೆರ್ಬ್ಬೊೞಲ್ > ಪೆರ್ಬ್ಬೊಳ್ > ಪೆಬ್ಬೊಳ್ > ಪೆಬ್ಬಾಳ > ಹೆಬ್ಬಾಳ ೯ರಿಂದ ೧೧ ನೇ ಶತಮಾನದ ಅವಧಿಯಲ್ಲಿ ‘ಪ’ ಅಕ್ಷರದಿಂದ ಶುರುವಾಗುವ ಕನ್ನಡ ಪದಗಳಲ್ಲಿ ‘ಪ’ ಅಕ್ಷದ ಬದಲು ‘ಹ’ ಅಕ್ಷರವು ಬಳಕೆಗೆ ಬಂತು. (ಉದಾ: ಪುಲಿ -> ಹುಲಿ, ಪಾಲು -> ಹಾಲು). ಅದೇ ತರಹ ‘ವ’ ಅಕ್ಷರವು ‘ಬ’ ಆಯಿತು. ಕಾಲಕ್ರಮೇಣ ‘ಪೆರ್ಬೊಳಲ್’ ಎಂಬುದು ‘ಹೆಬ್ಬಾಳ’ ಆಯಿತು. == ಈ ಶಿಲಾಬರಹದ ಪ್ರಾಮುಖ್ಯತೆ == ಬೆಂಗಳೂರಲ್ಲಿ ಈವರೆಗೂ ದೊರೆತಿರುವ ಸುಸ್ಥಿತಿಯಲ್ಲಿರುವ ಕನ್ನಡ ಶಿಲಾಬರಹಗಳಲ್ಲಿ ಇದು ಅತ್ಯಂತ ಹಳೆಯಕಾಲದ್ದಾಗಿದೆ. ಕನ್ನಡದಲ್ಲಿ ದೊರೆಕಿರುವ ಅತ್ಯಂತ ಹಳೆಯ ಬರೆವಣಿಗೆ ಕೃತಿಯಾದ ‘ಕವಿರಾಜಮಾರ್ಗ’ಕ್ಕಿಂತ ಇದು ಸುಮಾರು ೧೦೦ ವರ್ಷಗಳ ಹಿಂದಿನ ಕಾಲದ್ದಾಗಿದ್ದು ಲಿಪಿಯ ರೂಪ ಆಕಾರಗಳ ಬೆಳವಣಿಗೆ/ಬದಲಾವಣೆ ಬಗ್ಗೆ ಮಾಹಿತಿ ಒದಗಿಸುತ್ತದೆ. ಈ ಶಿಲಾಬರಹದಲ್ಲಿ ಉಲ್ಲೇಖಿಸಿರುವಂತೆ ‘ಕಿತ್ತಯ್ಯ’ ಎಂಬ ವ್ಯಕ್ತಿಯು ಈಗಿನ ಬೆಂಗಳೂರು ಪ್ರದೇಶದಲ್ಲಿ ಮೊತ್ತಮೊದಲ ದಾಖಲಾಗಿರುವ ನಾಗರೀಕನೊಬ್ಬನ ಹೆಸರಾಗಿದೆ. ಹಾಗಾಗಿ ಈತ ಬೆಂಗಳೂರಿನ ಮೊದಲ ದಾಖಲಿತ ನಾಗರೀಕನೆಂದು ಇತಿಹಾಸಕಾರರಿಗೆ ಪ್ರಿಯವಾಗಿದ್ದಾನೆ.. == ಸಮುದಾಯದಿಂದ ಧನಸಂಗ್ರಹಿಸಿ ನಿರ್ಮಿಸಿದ ಮಂಟಪ == ಎಪಿಗ್ರಾಫಿಯ ಕರ್ನಾಟಿಕ ಗ್ರಂಥದ ೯ನೇ ಸಂಪುಟ, ೧೯೦೫ ನೇ ಇಸವಿಯ ಆವೃತ್ತಿಯಲ್ಲಿ ಬೆಂಗಳೂರು ಪ್ರದೇಶದ ಸುಮಾರು ೧೬೦ಕ್ಕೂ ಹೆಚ್ಚು ಶಿಲಾಶಾಸನ/ಬರಹಗಳು ದಾಖಲಾಗಿವೆ. ಆದರೆ ಪ್ರಸ್ತುತ ಅವುಗಳಲ್ಲಿ ಕೇವಲ ೫೦ ಮಾತ್ರ ಉಳಿದುಕೊಂಡಿವೆ. ಇಂತಹ ಸಂದರ್ಭದಲ್ಲಿ ದೊರೆತ ಎಂಟನೇ ಶತಮಾನದ ಈ ಶಿಲಾಬರಹವು ಅತ್ಯಂತ ಮಹತ್ವದಾಗಿದೆ. ಹಾಗಾಗಿ ಇಂತಹ ಶಾಸನ/ಬರಹಗಳ ಸಂರಕ್ಷಣೆಯಲ್ಲಿ ಮತ್ತು ದಾಖಲಾತಿಯಲ್ಲಿ ತೊಡಗಿರುವ “ ” ಎಂಬ ಸಮುದಾಯವು ಈ ಕಿತ್ತಯ್ಯ ಶಿಲಾಬರಹವನ್ನು ಸೂಕ್ತವಾಗಿ ಪ್ರತಿಷ್ಠಾಪಿಸಿ ಕಾಪಾಡುವ ಉದ್ದೇಶದಿಂದ ಇದಕ್ಕಾಗಿ ಗಂಗ ಶೈಲಿಯ ಮಂಟಪವೊಂದನ್ನು ನಿರ್ಮಿಸುವ ಯೋಜನೆ ಹಾಕಿತು. ವಾಸ್ತುಶಿಲ್ಪಿ ಯಶಸ್ವಿನಿ ಶರ್ಮಾ ಅವರು ಗಂಗ ಶೈಲಿಯ ಮಂಟಪದ ವಿನ್ಯಾಸ ಮಾಡಿದರು. ನಿರ್ಮಾಣಕ್ಕಾಗಿ ಜನರಿಂದಲೇ ಹಣಸಂಗ್ರಹ ಮಾಡುವ ಕೆಲಸಮಾಡಲಾಯಿತು. ಜನವರಿ ೨೦೨೦ರಲ್ಲಿ ಈ ಮಂಟಪದ ನಿರ್ಮಾಣಕಾರ್ಯ ಪೂರ್ಣಗೊಂಡಿತು. ಹೆಬ್ಬಾಳದ ನಾಗರೀಕರು ಜನವರಿ ೧೪, ೨೦೨೦ರ ಸಂಕ್ರಾಂತಿಯಂದು ಇದನ್ನು ಅಧಿಕೃತವಾಗಿ ಉದ್ಘಾಟನೆಗೊಳಿಸಿದರು ಮತ್ತು ಆ ಸ್ಥಳದಲ್ಲಿ ಹಬ್ಬದ ಆಚರಣೆಮಾಡಿ ಸಂಭ್ರಮಿಸಿದರು. == ಉಲ್ಲೇಖಗಳು == == ಹೊರಸಂಪರ್ಕಕೊಂಡಿಗಳು == ಕಲೆಕ್ಟರ್ ಎಡಿಷನ್‌ ಹೆಬ್ಬಾಳ ಶಾಸನ, ಉದಯವಾಣಿ